ಬೀಚ್ ಎಂಬ ಬಿಡದೆ ಕಾಡಿದ ಗುಮ್ಮ !


ಪೂರ್ವ ಕರಾವಳಿ ಬಂಗಾಳ ಕೊಲ್ಲಿ ತನ್ನ ಘನ ಗಂಭಿರ್ಯದಲ್ಲೂ ಅಲೆಯೊಂದಿಗೆ ತಂಗಾಳಿಯನ್ನು ರವಾನಿಸುತ್ತಿದೆ.ನೇಸರ ತನ್ನ ಪ್ರತಿಬಿಂಬವನ್ನು ಶರಧಿಯಲ್ಲಿ ನೋಡಿ ನೋಡಿ ಸಾಕಾಗಿ ಮನೆಗೆ ಮರಳಲು ಕೊನೆಯ ಹಂತದ ಸಿದ್ಧತೆ ನಡೆಸುತ್ತಿದ್ದಾನೆ.ಇತ್ತ ಪುಟ್ಟ ಮಗುವಂದು ಮರಳಿನಲ್ಲಿ ಮನೆ ಕಟ್ಟಲು ತನ್ನ ತಾಯಿಯನ್ನು ಪೀಡಿಸುತ್ತಿದೆ.ರೋಸಿಗೊಂಡ ತಾಯಿ ಮನೆ ಕಟ್ಟಲು ಮುಂದಾಗುತಿದ್ದಾಳೆ.ಅಮ್ಮನಿಗೆ ಸಹಾಯವಾಗಲೆಂದು ಆ ಪುಟ್ಟ ಮಗು ನಿರಂತರವಾಗಿ ಮರಳನ್ನು ಒಟ್ಟುಗೂಡಿಸುತ್ತಿದೆ.ಕೈ ಕೊಳೆಯಾಯಿತೆಂದು ಅಮ್ಮ ಗದರಿಸಲು ಮಗು ಮುನಿಸಿಗೊಂಡು ಆ ನೀಲ ಶರಧಿಯತ್ತ ಮುಖ ಮಾಡಿದೆ.ಸಿಟ್ಟಿನಿಂದ ಕಾಲಿಗೆ ತಾಕಿದ ಅಲೆಗೆ ಕಾಲಿನಿಂದಲೇ ಹೊಡೆದಿದೆ.ಮಗು ಹೊಡೆತಕ್ಕೆ ಗದರಿದಂತೆ ಅಲೆ ಮತ್ತೆ ಹಿಂಬರ್ಕಿಯಾಗಿ ಸಾಗರದ ಒಡಲ ಸೇರುತ್ತಿದೆ. ಅಮ್ಮ ಮರಳಿನ ಮನೆ ಕಟ್ಟಲು ಮುನಿದ ಮಗು ಸಂಭ್ರಮಿಸಿದೆ. ಅಲ್ಲೊಬ್ಬ ವಿದೇಶಿ ಯುವತಿ ಆ ಅಪಾರ ನೀರನ್ನು ಕಂಡು ತನ್ನೆರಡು ಕೈಗಳನ್ನು ಗಲ್ಲಕಿಟ್ಟುಕೊಂಡು ಚಕಿತಗೊಂಡಿದ್ದಾಳೆ. ಅಲೆ ಬಂದೊಡನೆ ಜಿಗಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಅವಳ ಪಾದಗಳು ನೀರನ್ನು ಸ್ಪರ್ಶಿಸಲು ಚಿಲ್ ಎಂದು ಕೂಗಿ ಸಂಭ್ರಮಿಸಿದ್ದಾಳೆ. ಅದೇನೋ ಮರೆತಂತೆ ನೆನಪಾಗಿ ತನ್ನ ಹೋಟೆಲ್ ಕೊಠಡಿಯತ್ತ ಮುಖ ಮಾಡಿ ಓಡಿ ಹೋಗಿದ್ದಾಳೆ. ಅಲ್ಲಿಂದ ಲ್ಯಾಪ್ಟಾಪ್ ಹೊತ್ತು ಮತ್ತೆ ತೀರಕ್ಕೆ ! ಬಹುಶಃ ತನಗಾದ ತಾಜಾ ಅನುಭವಗಳನ್ನು ತನ್ನಿಯನೊಂದಿಗೆ ಹಂಚಿಕೊಳ್ಳುವ ಹಂಬಲವೇನೋ? ತನ್ನ ಧ್ವನಿಗಾಗಿ ಹೂಗೊಟ್ಟು ಕೂತಂತಿರುವ ಸಾಗರದಾಚೆಗಿನ ತನ್ನ ಇನಿಯನಿಗೆ ಅದೇನೋ ಟೈ ಪಿಸಿದ್ದಾಳೆ. ಐ ಮಿಸ್ ಯು .... ಆ ಕಡೆಯಿಂದ ನಗು ಮುಖದೊಂದಿಗೆ ಐ ಟೂ.. ಎಂಬ ಉದ್ಗಾರ. ಅಲ್ಲಿ ನಿಸ್ತಂತು ಅಂತರ್ಜಾಲ ಸೌಲಬ್ಯವಿದೆ. ಇಷ್ಟಕೆಲ್ಲ ಪ್ರೈವೇಟ್ ಬೀಚ್ ಎಂಬ ಸಂಕೋಲೆ ಇದೆ.